ರಹಮಾನ್‍ಘರ್
ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರದ ಉಪಭಾಗಕ್ಕೆ ಸೇರಿದ ಚಿಂತಾಮಣಿ ತಾಲ್ಲೂಕು ಮತ್ತು  ಹೋಬಳಿಗೆ ಸೇರಿದ ಒಂದು ಗಿರಿದುರ್ಗ.  ಚಿಂತಾಮಣಿಯ ನೈಋತ್ಯಕ್ಕೆ ಸು. 11 ಕಿಮೀ ದೂರದಲ್ಲಿದೆ.  ಈ ಗಿರಿದುರ್ಗವನ್ನು ಸಮುದ್ರಮಟ್ಟಕ್ಕೆ 1,304 ಕಿಮೀ. ಎತ್ತರವಿರುವ ಬೆಟ್ಟದ ಮೇಲೆ ಕಟ್ಟಿದೆ.  ದುರ್ಗವನ್ನು ಕೈವಾರದ ಈಶಾನ್ಯ ಭಾಗದಲ್ಲಿರುವ ಶಾಮರಾವ್ ಹೊಸಪೇಟೆಯ ಕಡೆಯಿಂದ ಹತ್ತಬಹುದು.  ಈ ದುರ್ಗ ಸ್ವಲ್ಪಕಾಲ ಮರಾಠರ ಆಡಳಿತಕ್ಕೆ ಸೇರಿತ್ತೆಂದೂ ಮುಂದೆ ಟಿಪ್ಪುಸುಲ್ತಾನನ ಕೈಸೇರಿ ಐತಿಹಾಸಿಕ ಪ್ರಾಮುಖ್ಯ ಪಡೆಯಿತೆಂದೂ ತಿಳಿದುಬರುವುದು.  1791 ರಲ್ಲಿ ಇದು ಬ್ರಿಟಿಷರ ಆಡಳಿತಕ್ಕೆ ಸೇರಿತು.

ಈ ಗಿರಿದುರ್ಗ ಈಗಲೂ ಬಲವಾಗಿದ್ದು ಇಲ್ಲಿ ಅನೇಕ ಕಟ್ಟಡಗಳೂ ಭಗ್ನ ಮಂದಿರಗಳೂ ಇವೆ.  ಅವುಗಳಲ್ಲಿ ಕೆಲವು ಮದ್ದುಗುಂಡುಗಳ ದಾಸ್ತಾನಿಗಾಗಿ ಉಪಯೋಗಿಸುತ್ತಿದ್ದ ಮಳಿಗೆಗಳೆಂದು ತೋರುತ್ತದೆ.  ಆನೆ ಮತ್ತು ಕುದುರೆ ಲಾಯಗಳೂ ಇಲ್ಲಿದ್ದಂತೆ ತೋರುತ್ತದೆ.  ಚುರ್ಗದ ಕೆಲವು ಪಾಶ್ರ್ವಗಳಲ್ಲಿ ಆಪತ್ಕಾಲದಲ್ಲಿ ಪಾರಾಗಲು ನಿರ್ಮಿಸಿದ ಸುರಂಗ ಮಾರ್ಗಗಳಿವೆ, ದುರ್ಗದ ಕೋಟೆ ರಕ್ಷಣೆಗೆ ಎರಡು ಬುರುಜುಗಳನ್ನು ನಿರ್ಮಿಸಿದ್ದು ಭಗ್ನವಾದ ದ್ವಾರವಿರುವುದು ಕಂಡುಬರುತ್ತದೆ.  ಬಾಗಿಲ ಬಳಿಯೇ ಇರುವ ಸಹಜ ನೀರಿನ ತಾಣವನ್ನು ಬಾವಿಯನ್ನಾಗಿ ಪರಿವರ್ತಿಸಿದೆ.  ಅರಮನೆ ಅಥವಾ ಮುಖ್ಯಸ್ಥಾನದ ದೊಡ್ಡ ಮನೆಯ ಅವಶೇಷವಿದೆ.  ಇಂದಿನ ಕೈವಾರವೇ ಮಹಾಭಾರತದ ಕಾಲಕ್ಕೆ ಸೇರಿದ ಏಕಚಕ್ರಪುರವಾಗಿದ್ದು ಇಲ್ಲಿ ಕೆಲವು ಕಾಲ ಪಾಂಡವರು ವಾಸವಾಗಿದ್ದರೆಂದೂ ಆಗ ಭೀಮ ಈ ಬೆಟ್ಟದಲ್ಲಿ ವಾಸವಾಗಿದ್ದ ಬಕಾಸುರನನ್ನು ಕೊಂದನೆಂದೂ ಪ್ರತೀತಿ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ